Thursday, August 20, 2009

ಯಕ್ಷಗಾನ ರೇವತಿ ಕಲ್ಯಾಣಶ್ರೀಯುತ
ವಾಮಂಜೂರು ಪರಮೇಶ್ವರಯ್ಯ ವಿರಚಿತ "ರೇವತಿ ಕಲ್ಯಾಣ " ಪ್ರಸಂಗವು ಶ್ರೀಮಧ್ಬಾಗವತ ಆಧಾರಿತ ಕಥೆ . ಕೃತಯುಗದಲ್ಲಿ ರೈವತ ರಾಜನು ತನ್ನ ಮಗಳಾದ ರೇವತಿಗೆ ವಿವಾಹ ಮಾಡಿಸಬೇಕೆಂದು ಯೋಗ್ಯ ವರನನ್ನು ಅರಸುತ್ತಿರುತ್ತಾನೆ . ಸರಿಯಾದ ಸಂಬಂಧ ಸಿಗದೇ ಇರಲು ತನ್ನ ಮಂತ್ರಿಯನ್ನು ಕರೆದು ಏನು ಮಾಡೋಣ ಎಂಬುದಾಗಿ ಅಭಿಪ್ರಾಯ ಕೇಳಿದಾಗ, ಮಂತ್ರಿ ಸುಮತಿಯು ಸೃಷ್ಟಿಕರ್ತ ನಾದ ಬ್ರಹ್ಮನನ್ನೇ ಕೇಳಿ ರೇವತಿಗೆ ತಕ್ಕ ವರ ಯಾರೆಂದು ತಿಳಿಯುವುದೇ ಸೂಕ್ತ ಎಂಬ ಸಲಹೆಯ ಮೇರೆಗೆ ರೈವತನು ಮಗಳ ಸಮೇತ ಸತ್ಯಲೋಕವನ್ನು ಸೇರುತ್ತಾನೆ. ಸಮಯದಲ್ಲಿ ಬ್ರಹ್ಮ ಲೋಕದ ಸಭೆಯಲ್ಲಿ ಕಲಾಪಗಳು ಮುಗಿದು ನರ್ತನ ಕಾರ್ಯಕ್ರಮ ನಡೆಯುತ್ತಿರುತ್ತದೆ. ಬ್ರಹ್ಮಲೋಕದ ನರ್ತನವನ್ನು ಕಂಡು ರೈವತನೂ ಅವನ ಮಗಳು ರೇವತಿಯೂ ನೃತ್ಯ ವೀಕ್ಷಣೆಯಲ್ಲಿ ಮೈಮರೆತಿರುತ್ತಾರೆ .

ಇತ್ತ ಭೂಲೋಕದಲ್ಲಿ ಬ್ರಹ್ಮದತ್ತನ ಮಕ್ಕಳಾದ ಹಂಸ ಡಿಬಿಕರು ತಂದೆಯ ಅಪ್ಪಣೆ ಮೇರೆಗೆ ಶಿವನನ್ನು ಮೆಚ್ಚಿಸಲು ತಪಸ್ಸಿಗೆ ತೆರಳಿ ಶಿವನಿಂದ ಅನುಗ್ರಹ ಪೂರ್ವಕವಾಗಿ "ಹಾ ಹಾ " ಹೀಹೀ " ಎಂಬ ಎರಡು ಭೂತಗಳನ್ನು ತಮ್ಮ ರಕ್ಷಣೆಗಾಗಿ ವರವಾಗಿ ಪಡೆಯುತ್ತಾರೆ .
ಈ ಮಧ್ಯೆ ಕೃಷ್ಣ ಬಲರಾಮರು ವಿಧ್ಯಾಭ್ಯಾಸಕ್ಕಾಗಿ ಆವಂತಿ ನಗರದ ಸಾಂದೀಪನಿ ಗುರುಗಳಲ್ಲಿ ಆಗಮಿಸಿ , ಅರುವತ್ತನಾಲ್ಕು ವಿದ್ಯೆಗಳಲ್ಲೂ ಪಾರಂಗತರೆನಿಸಿ , ಗುರುವಿನಲ್ಲಿ ಗುರುದಕ್ಷಿಣೆ ಏನು ಬೇಕೆಂದು ಬೇಡಿದಾಗ ಪ್ರಭಾಸ ತೀರ್ಥದಲ್ಲಿ ಅಳಿದು ಹೋದ ತನ್ನ ಮಗನಾದ ಮಣಿಕರ್ಣನನ್ನು ತಂದು ಕೊಡಬೇಕೆಂದು ಹೇಳುತ್ತಾನೆ. ಗುರುವಿನಿಂದ ಆಜ್ಞಪ್ತರಾದ ಬಲರಾಮ ಕೃಷ್ಣರು ಸಾಗರ ತಳದಲ್ಲಿದ್ದ ಪಂಚಜನ ಎಂಬ ರಕ್ಕಸನನ್ನು ಕೊಂದು ಅವನ ಕೋರಿಕೆಯಂತೆ ಅವನ ಅಸ್ಥಿಯಿಂದ ಪಾಂಚಜನ್ಯ ವೆಂಬ ಶಂಖವನ್ನು ಮಾಡಿ , ಅವನ ಸೂಚನೆಯಂತೆ ಯಮಲೋಕಕ್ಕೆ ತೆರಳಿ ಯಮನನ್ನು ಸಂದರ್ಶಿಸಿ ಗುರು ಕಾಣಿಕೆ ತಂದು ಒಪ್ಪಿಸುತ್ತಾರೆ .
ಬಳಿಕ ಕಾಲಾಂತರದಲ್ಲಿ ಕಾಲಯವನ ದ್ವಾರಕೆಗೆ ಧಾಳಿಯಿಟ್ಟಾಗ ಅವನಿಗೆ ಹೆದರಿದಂತೆ ನಟಿಸಿ ಕೃಷ್ಣನು ಮುಚುಕುಂದನೆಂಬ ರಾಜರ್ಷಿ ನಿದ್ರಿಸುತ್ತಿದ್ದ ಗುಹೆಯೊಳಗೆ ಹೋಗಿ ಮುಚುಕುಂದನ ಮೂಲಕ ಕಾಲಯವನನ ಸಂಹಾರ ಮಾಡಿ ಮುಚುಕುಂದನಿಗೆ ದರ್ಶನವಿತ್ತು ಬರುತ್ತಾನೆ.
ಮುಂದೆ ಹಂಸ ಡಿಬಿಕರ ಉಪಟಳ ಹೆಚ್ಚಾದಾಗ ಕೃಷ್ಣನಲ್ಲಿ ದುರ್ವಾಸರ ದೂರು .ಈ ಮಧ್ಯೆ ಬ್ರಹ್ಮ ದತ್ತನು ಯಾಗಕ್ಕಾಗಿ ಕಪ್ಪ ಸಂಗ್ರಹಿಸಿ , ಯಾದವರಿಂದ ಕಪ್ಪವಾಗಿ ಉಪ್ಪನ್ನು ಹೊತ್ತು ತರಲು ಬ್ರಹ್ಮ ದತ್ತನ ಆಸ್ಥಾನ ಪುರೋಹಿತ ಜನಾರ್ಧನ ಭಟ್ಟನ ನ್ನು ದ್ವಾರಕೆಗೆ ಕಳಿಸುತ್ತಾನೆ . ಅವನ ದೂರಿನನ್ವಯ ಕೃಷ್ಣನು ಸಾತ್ಯಕಿಯನ್ನು ಬ್ರಹ್ಮದತ್ತನಲ್ಲಿ ಸಂಧಾನದ ನಾಟಕವಾಡಲು ಕಳಿಸುತ್ತಾನೆ. ಸಂಧಾನ ಮುರಿದು ಬಂದ ಸಾತ್ಯಕಿ, ಕೃಷ್ಣ ಬಲರಾಮರು ಬ್ರಹ್ಮದತ್ತ, ಹಂಸ ದಿಬಿಕರಲ್ಲಿ ಯುದ್ಧ ಮಾಡಿ ಬಲರಾಮ ಬ್ರಹ್ಮದತ್ತನನ್ನು ಕೊಲ್ಲುತ್ತಾನೆ . ಬ್ರಹ್ಮ ಸಭೆಯಲ್ಲಿ ಸೋಲಿಸಿದಾಗ ಅವರು ತಮ್ಮ ಭೂತ ಗಳನ್ನೂ ಕರೆದು ಕೃಷ್ಣನಲ್ಲಿಗೆ ಕಳಿಸುವರು . ಕೃಷ್ಣ ಅವನ್ನು ಓಡಿಸುವನು.ಸೋತ ಹಂಸನು ಪಲಾಯನ ಗೈದಾಗ ಅವನನ್ನು ಬೆನ್ನತಿದ ಕೃಷ್ಣನು ಹಂಸನು ಯಮುನೆಗೆ ಹಾರಿ ಪ್ರಾಣ ಕಳೆದುಕೊಳ್ಳುವಂತೆ ಮಾಡುವನು . ಅಣ್ಣನನ್ನು ಕಾಣದ ಡಿಬಿಕನು ಕೃಷ್ಣನಲ್ಲಿ ಅಣ್ಣನೆಲ್ಲಿ ಎಂದು ಕೇಳಿದಾಗ "ಅವನು ಆಗಲೇ ಯಮುನೆಗೆ ಹಾರಿ ಸತ್ತ " ಎಂದಾಗ ವೇದನೆ ತಾಳಲಾರದೆ ಡಿಬಿಕನು ನಾಲಿಗೆ ಸೀಳಿ ಪ್ರಾಣ ಕಳೆದುಕೊಳ್ಳುವನು .
ಇತ್ತ ಬ್ರಹ್ಮ ಸಭೆಯಲ್ಲಿ ನೃತ್ಯ ಮುಗಿದಾಗ ರೈವತನು ಮಗಳ ಸಮೇತ ಬ್ರಹ್ಮನಿಗೆ ಎರಗಿ ಬಂದ ವಿಚಾರ ತಿಳಿಸುತ್ತಾರೆ .ಆಗ ಬ್ರಹ್ಮನು ನಕ್ಕು ಈಗಾಗಲೇ ಭೂಲೋಕದಲ್ಲಿ ಒಂದು ಯುಗವೇ ಕಳೆದು ದ್ವಾಪರ ಯುಗ ಆರಂಭವಾಗಿದೆಯೆಂದೂ ದ್ವಾರಕೆಯಲ್ಲಿ ಬಲರಾಮನಿದ್ದು ಅವನೇ ರೇವತಿಗೆ ಸೂಕ್ತ ವರನೆ೦ದಾಗ ರೈವತನು ಮಗಳ ಸಮೇತ ದ್ವಾರಕೆಗೆ ಬಂದು ಕೃಷ್ಣನಿಗೆ ಬಿನ್ನೈಸಿ ಬಲರಾಮನಿಗೆ ರೇವತಿಯನ್ನಿತ್ತು ಮದುವೆ ಮಾಡುತ್ತಾನೆ. ಯುಗಾಂತರದ ಕಥೆಯುಳ್ಳ ಈ ಪ್ರಸಂಗ ಇತರ ಎಲ್ಲ ಪ್ರಸಂಗಗಳಿಂದ ಅನನ್ಯವಾಗಿದೆ (unique).


ಉಡುಪಿಯ ಮಧ್ವಸಿದ್ಧಾಂತ ಗ್ರಂಥಾಲಯದವರು ಪ್ರಕಟಿಸಿದ ಈ ಕೃತಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮಂಡಳಿಯವರು ಇಡೀ ರಾತ್ರಿ ಪ್ರದರ್ಶಿಸುವುದನ್ನು ಕಾಣಬಹುದು. ಒಟ್ಟಿನಲ್ಲಿ ಈ ಪೌರಣಿಕ ಪ್ರಸಂಗ ಪ್ರೇಕ್ಷಕರಿಗೆ ಎಲ್ಲೋ ನಿರಾಸೆಯನ್ನುಂಟು ಮಾಡದೇ ವೇಗವಾಗಿ ಕಥಾಭಾಗ ಸಾಗುವುದರಿಂದ ಪ್ರದರ್ಶನದಲ್ಲಿ ಯಶಸ್ವಿಯಾಗುತ್ತದೆ.

ನಾನು ಇದುವರೆಗೆ ಎರಡು ಬಾರಿ ನೋಡಿದ ಈ ಪ್ರಸಂಗದ ಪಾತ್ರಗಳಲ್ಲಿ ಜಯಪ್ರಕಾಶ್ ರ ಹಂಸ ,ಕೃಷ್ಣ , ಸುಬ್ರಾಯ ಹೊಳ್ಳರ ಡಿಬಿಕ , ರೆಂಜಾಳ ರಾಮಕ್ರಿಷ್ಣ ರಾಯರ ಮುಚುಕುಂದ , ಬಾಯಾರು ರಮೇಶ ಭಟ್ಟರ ರೇವತಿ ,ಜನಾರ್ಧನ ಭಟ್ಟ ನಾಗಿ ಮಹೇಶ್ ಮಣಿಯಾಣಿ ,ಬ್ರಹ್ಮದತ್ತನಾಗಿ ಶಿವಪ್ರಸಾದ್ ಪೆರುವಾಜೆ ಪಾತ್ರಗಳು ಉತ್ತಮವಾಗಿದ್ದುವು .


ಹವ್ಯಾಸಿಗಳಿಗೆ ಪ್ರದರ್ಶನಕ್ಕೆ,ಶಾಲಾಮಕ್ಕಳ ಪ್ರದರ್ಶನಕ್ಕೆ ,ವೃತ್ತಿಪರರ ಕಾಲಮಿತಿ ಪ್ರದರ್ಶನಕ್ಕೂ ಇದು ಒಂದು ಉತ್ತಮ ಪ್ರಸಂಗವೆಂಬುದನ್ನು ನಿಡ್ಲೆ ತಂಡದವರು ಇತ್ತೀಚಿಗೆ ಮೈಸೂರಿನಲ್ಲಿ ಪ್ರದರ್ಶಿಸಿ ತೋರಿಸಿದ್ದಾರೆ.

1 comment: